ಭಕ್ತರ ಬಂಧು ಕುರುಬ ಗೊಲ್ಲಾಳೇಶ್ವರನ ಪವಾಡ ಸಿಂದಗಿ ತಾಲೂಕಿನ ಗೋಲಗೇರಿ ಅಂದಾಜು 800 ವರ್ಷಗಳ ಪೌರಾಣಿಕ ಇತಿಹಾಸ ಹೊಂದಿದ ಗ್ರಾಮ. ಹಿಂದೆ ಲಿಂಗಯ್ಯನಪುರ ಎಂದು ಕರೆಯಲಾಗುತ್ತಿದ್ದ ಈ ಗ್ರಾಮದ ಪಕ್ಕದ ಢವಳಾರ ಗ್ರಾಮದಲ್ಲಿ ಕುರುಬ ಸಮಾಜದ ಕುಟುಂಬವೊಂದು ವಾಸವಾಗಿತ್ತು. ಈ ಕುಟುಂಬದಲ್ಲಿ ಜನಿಸಿದ ಗೊಲ್ಲಾಳನೆಂಬ ಭಕ್ತನಿಗೆ ಶಿವ ಪ್ರಸನ್ನನಾದ ಎಂಬ ಕಥೆ ಕೇಳಿಬರುತ್ತದೆ. ನಂತರ ಇಲ್ಲಿ ಶಿವ ಹಾಗೂ ಭಕ್ತನೇ ದೈವವಾಗಿ ಗೊಲ್ಲಾಳೇಶ್ವರ ಎಂಬ ನಾಮದಿಂದ ಶಿವಭಕ್ತ ಪರಂಪರೆ ಬೆಳೆದುಬಂದದ್ದು ಇತಿಹಾಸ. ಢವಳಾರ ಗ್ರಾಮದ ಬಲ್ಲುಗ ದುಗ್ಗಳಾದೇವಿ ಎಂಬ ಕುರುಬ ಕುಟುಂಬದಲ್ಲಿ ಜನಿಸಿದ ಗೊಲ್ಲಾಳ ಕುಲವೃತ್ತಿಯಂತೆ ಕುರಿ ಕಾಯುತ್ತಿದ್ದ. ಸದಾ ಶಿವ ಧ್ಯಾನ ನಡೆಸುತ್ತಿದ್ದ ಈತ ಶಿವಲಿಂಗವೇ ಸಾಕ್ಷಾತ್ ಶಿವ ಎಂದು ನಂಬಿದ್ದ. ಪ್ರತಿ ವರ್ಷ ಚೈತ್ರಮಾಸದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ದರ್ಶನಕ್ಕಾಗಿ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಭಕ್ತರು ಹಾಗೂ ಕಂಬಿ ಸ್ವಾಮಿಗಳನ್ನು ಕಂಡು ಭಾವುಕನಾದ ಗೊಲ್ಲಾಳನು ನಂದಯ್ಯನೆಂಬ ಸ್ವಾಮಿಗಳನ್ನು ಕಂಡು ತನ್ನ ಬಳಿ ಇದ್ದ ಹೊನ್ನಿನ ನಾಣ್ಯ ನೀಡಿ ಶ್ರೀಶೈಲದಿಂದ ಬರುವಾಗ ಶಿವಲಿಂಗ ತರುವಂತೆ ಕೇಳಿಕೊಂಡ. ನಂದಯ್ಯ ಸ್ವಾಮಿಗಳು ಆಗಲಿ ಎಂದು ಶ್ರೀಶೈಲಕ್ಕೆ ತೆರಳಿ ದರ್ಶನ ಪಡೆದು ಗೋಲಗೇರಿ ಗ್ರಾಮದ ಬಳಿ ಬಂದಾಗ ಶಿವಲಿಂಗ ತರುವಂತೆ ಗೊಲ್ಲಾಳ ಹೇಳಿದ ಮಾತು ನೆನಪಾಯಿತು. ಆದರೆ ಅವರು ಲಿಂಗ ತಂದಿರಲಿಲ್ಲ. ಪಕ್ಕದಲ್ಲೇ ...