ಗದಗ : 2018 ರ ವಿಧಾನಸಭೆ ಚುನಾವಣೆಯಲ್ಲಿ ಶೇ. 90 ರಷ್ಟ ಕುರುಬರು ಸಿದ್ದರಾಮಯ್ಯರವರನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದೇವೆ. ಕಾಂಗ್ರೆಸ್ ಪಕ್ಷ ಉಂಡ ಮನೆಗೆ ದ್ರೋಹ ಬಗೆದಿದೆ, ಸಮ್ಮಿಶ್ರ ಸರ್ಕಾರದಲ್ಲಿ ಕುರುಬರಿಗೆ ಸಚಿವ ಸ್ಥಾನ ನೀಡದೇ ಅನ್ಯಾಯ ಮಾಡಲಾಗುತ್ತಿದೆ ಎಂದು ಹಾಲುಮತ ಮಹಾಸಭಾ ಆಕ್ರೋಶ ವ್ಯಕ್ತಪಡಿಸಿದೆ.
ಕರ್ನಾಟಕದಲ್ಲಿರುವ ಕುರುಬರು ಮುಗ್ದರೇ ಇರಬಹುದು, ಆದರೆ ಷಂಡರಲ್ಲ, ಎಲ್ಲವನ್ನು ಸಹಿಸಿಕೊಳ್ಳುತ್ತಾರೆ ಎಂದು ಕೊಂಡರೆ ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಕುರುಬರಿಗೆ ಸಚಿವ ಸ್ಥಾನ ಕೊಡಿಸದೇ ಸಿದ್ದರಾಮಯ್ಯನವರು ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗುವುದು ಬೇಡ.
ಕುರುಬರಿಗೆ ಅನಾದಿ ಕಾಲದಿಂದಲೂ ಅನ್ಯಾಯ ಮಾಡಿಕೊಂಡೇ ಬರುತ್ತಿದೆ. ಒಂದು ಕಡೆ ಮೇಲ್ವರ್ಗದವರ ದೌರ್ಜನ್ಯ ಮತ್ತೊಂದು ಕಡೆ ಕೆಳವರ್ಗದವರಿಂದ ಜಾತಿ ನಿಂದನೆ ದೌರ್ಜನ್ಯ, ಕರ್ನಾಟಕ ರಾಜ್ಯದಲ್ಲಿ 30 ಜಿಲ್ಲೆಗಳಲ್ಲೂ ಹರಡಿಕೊಂಡಿರುವ ಕುರುಬರು ನೆಮ್ಮದಿಯಾಗಿ ಜೀವನ ಮಾಡುವಂತಿಲ್ಲದ ಸ್ಥಿತಿ, ರಾಜಕೀಯ ಕ್ಷೇತ್ರದಲ್ಲೂ ಈ ರೀತಿಯ ತಾರತಮ್ಯ, ಮೋಸ ಅನ್ಯಾಯವಾಗುತ್ತಿದೆ. ಇದನ್ನು ಕುರುಬ ಸಮುದಾಯ ಸಹಿಸಿಕೊಳ್ಳುವುದಿಲ್ಲ ಎಂದು ಮಹಾಸಭಾ ಹೇಳಿದೆ.
ಈ ಕೂಡಲೇ ನಾಲ್ಕು ಶಾಸಕರಿಗೆ ಸಚಿವ ಸ್ಥಾನ ನೀಡದೇ ಹೋದ್ರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದಲ್ಲಿರುವ ಕುರುಬರು ಸಂಪೂರ್ಣವಾಗಿ ಬಹಿಷ್ಕರಿಸಬೇಕಾಗುತ್ತದೆ ಎಂದು ಹಾಲುಮತ ಮಹಾಸಭಾ ಎಚ್ಚರಿಕೆ ನೀಡಿದೆ.
Comments
Post a Comment