ಕನಕದಾಸರು ದ್ವೈತ -ಅದ್ವೈತದ ದುರ್ಬೀನಿಗೂ ನಿಲುಕದ ಮಹಾನಕ್ಷತ್ರ!
#ಕನಕ_ಜಯಂತಿಯ_ಪ್ರಯುಕ್ತ_ಈ_ಲೇಖನ_ಓದಿ
ಕನಕರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳೋಣ
ಕನ್ನಡದ ಭಕ್ತಿ ಪಂಥವನ್ನು ಬೆಳಗಿದ ಕನಕದಾಸರ ಬದುಕು ಮತ್ತು ಸಾಹಿತ್ಯ ಹಲವಾರು ನಿಟ್ಟಿನಿಂದ ವೈಶಿಷ್ಟ್ಯಪೂರ್ಣವೂ ಗಮನಾರ್ಹವೂ ಆಗಿವೆ. ಕೀರ್ತನೆಗಳು, ಉಗಾಭೋಗ, ಉದಯರಾಗ, ಡೊಳ್ಳುಪದ, ಮುಂಡಿಗೆ ಇತ್ಯಾದಿಗಳಲ್ಲದೆ ದ್ವಿಪದಿ, ತ್ರಿಪದಿ, ಚೌಪದಿ, ಷಟ್ಪದಿ, ಸಾಂಗತ್ಯ ಮುಂತಾದ ವಿವಿಧ ಕಾವ್ಯಶೈಲಿಯ ದೀರ್ಘ ಕೃತಿಗಳು ಕನಕದಾಸರ ಕೃತಿಶ್ರೇಣಿಯನ್ನು ವೈವಿಧ್ಯಮಯವಾಗಿಸಿವೆ. ಯಾವುದೇ ಸಾಧು ಸಂತರ ಬಾಳುವೆಯಲ್ಲಿ ಕಂಡುಬರುವ ಹಠಾತ್ ಪರಿವರ್ತನೆ ಕನಕದಾಸರ ಹರಯದಲ್ಲಿ ಆದರೂ, ನಿರಂತರ ತಾತ್ವಿಕ ಮಂಥನ ಮತ್ತು ಸಾಮಾಜಿಕ ಅಸಮಾನತೆಯ ಘರ್ಷಣೆಗಳೊಂದಿಗೆ ಬೆರಗಾಗುವಂತೆ ಬೆಳೆದು ನಿಂತ ವ್ಯಕ್ತಿತ್ವ ಅವರದು. ದಾಸರನ್ನು ಅರ್ಥೈಸುವುದರಲ್ಲಿ ಜಾತಿ-ಪಂಥಕ್ಕೆ ಜೋತುಬಿದ್ದ ತಾತ್ವಿಕ ಮಾಪನವನ್ನು ಹಿಡಿದು ಹೊರಟವರಿಗೆ ಕನಕರು ಕಾಣುವ ಬಗೆಯೇ ಬೇರೆ.
ಈಗ ನಂಬಿಕೆ ಇರುವಂತೆ ಕನಕದಾಸರು ಜಾತಿಯಿಂದ ಕುರುಬರು. ಇದನ್ನು ಅವರು ರಚಿಸಿರುವ "ದ್ಯಾವೀ ನಮ್ಮ ದ್ಯಾವರು ಬಂದರು ಬನ್ನೀರೇ" ಎಂಬ ಡೊಳ್ಳಿನ ಹಾಡು "ನಾವು ಕುರುಬರು ನಮ್ಮ ದೇವರು ಬೀರಯ್ಯ" ಎಂಬ ಕೃತಿಗಳು ಸಮರ್ಥಿಸುತ್ತವೆ. ಆದರೆ ದಾಸರು ಜಾತಿಯ ಶೃಂಕಲೆಗಳಲ್ಲಿ ಎಂದಿಗೂ ಬಂಧಿತರಾಗುಳಿದವರಲ್ಲ. ಅದರಾಚೆ ಬಂದು ಅಂತರ್ವಿಕಸನದ ಪಥದಲ್ಲಿ ಅನೇಕ ತಾತ್ವಿಕ ಪ್ರಯೋಗಗಳನ್ನು ನಡೆಸುತ್ತಾ ಮುಂದೆ ಸಾಗಿದವರು. "ರಾಮಾನುಜರೇ ನಮೋ ನಮೋ", "ರಾಮಾನುಜ ಮತೋದ್ಧಾರಕ" ಮುಂತಾದ ದಾಸರ ಕೀರ್ತನೆಗಳನ್ನು ನೋಡಿದರೆ ಅವರು ಒಂದಷ್ಟು ಕಾಲ ವಿಶಿಷ್ಟಾದ್ವೈತದ ಪ್ರಭಾವಕ್ಕೆ ಒಳಗಾಗಿದ್ದರೆಂಬುದು ಸ್ಪಷ್ಟ. ಆದರೆ ಅವರು ಆ ಘಟ್ಟದಲ್ಲಿಯೇ ನೆಲೆಯಾಗಿ ನಿಂತವರಲ್ಲ. ವಿಜಯನಗರದ ರಾಜಗುರುಗಳಾಗಿದ್ದ ವ್ಯಾಸರಾಜರ ಆಶ್ರಯ ಹಾಗೂ ಮಾರ್ಗದರ್ಶನ ದಾಸರಿಗೆ ಹರಿದಾಸ್ಯದ ಪರಮೋಚ್ಚ ಸೋಪಾನಕ್ಕೆ ಮುಟ್ಟಿಸಿತೆಂಬ ಭಾವದ ಹೊಳಹುಗಳು "ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು" , "ಹರಿ ನಿಮ್ಮ ಪದಕಮಲ ನಿರುತ ಧ್ಯಾನದಿ ಎನಗೆ ದೊರಕಿತೀ ಗುರುಸೇವೆ ಹರಿಯೇ" ಎಂಬ ಕೀರ್ತನೆಗಳಲ್ಲಿ ಕಾಣಬಹುದು. "ಖಿಲವಾದ ಮಧ್ವಮತವನು ಬಲಿದೆನಿಸಿ ಕಾಗಿನೆಲೆಯಾದಿಕೇಶವನೆ ಪರದೈವನೆಂದವನ" ಎಂದು ಮಧ್ವಾಚಾರ್ಯರ ಗುಣಗಾನವನ್ನು "ಪರಮಪದವಿಯನೀವ ಗುರುಮುಖ್ಯ ಪ್ರಾಣ" ಎಂಬ ಕೀರ್ತನೆಯಲ್ಲಿ ಮಾಡಿದ್ದಾರೆ. ಇಂತಹುದೇ ಭಾವಬಿಂದುಗಳ ಸಮೃದ್ಧತೆಯನ್ನು ದಾಸರ ಇನ್ನೂ ಹಲವಾರು ಕೀರ್ತನೆಗಳಲ್ಲಿ ನೋಡಬಹದು. ಆ ಸಂದರ್ಭದಲ್ಲಿ ನಿಕಟವರ್ತಿಗಳಾಗಿದ್ದ ಪುರಂದರದಾಸರು, ವೈಕುಂಠದಾಸರು, ವಾದಿರಾಜರು ಮುಂತಾದವರ ಸಂಪರ್ಕ ದಾಸರಿಗೆ ಭಕ್ತಿ ಭವ್ಯತೆಯ ವಿಹಂಗಮ ನೋಟವನ್ನೊದಗಿಸಿತು.
ವಿಜಯನಗರದಲ್ಲಿದ್ದ ವ್ಯಾಸತೀರ್ಥರ ಶ್ರೀಮಠ ಅವರಿಗೆ ಗುರುಕೃಪೆ ಹಾಗೂ ತಾತ್ವಿಕ ನೆಲೆಯನ್ನು ಕಲ್ಪಿಸಿಕೊಟ್ಟರೂ ಅಲ್ಲಿದ್ದ ಮಠೀಯ ಪಂಡಿತರ ಶಾಠ್ಯ ಹಾಗೂ ಸಂಕುಚಿತ ಭಾವಗಳು ಅವರಲ್ಲಿ ಜಿಗುಪ್ಸೆ ಮೂಡಿಸಲು ಕಾರಣವಾದವು. ಮೋಕ್ಷಕ್ಕೆ ಸಾಧನವಾಗಬೇಕಾದ ವೇದ, ಶಾಸ್ತ್ರಪುರಾಣಾದಿಗಳಲ್ಲಿ ನಿಷ್ಣಾತರಾದ ವಿದ್ವಾಂಸರ ಕೀಳು ಧೋರಣೆಗಳು, ಅಬ್ಬರ, ಆಡಂಬರದ ಮಡಿ ಮತ್ತು ಕುಲ, ಸಂಪ್ರದಾಯದ ಹೆಸರಿನಲ್ಲಿ ಮಾಡುವ ಶೋಷಣೆ ದಾಸರನ್ನು ಸಿಡಿದೇಳುವಂತೆ ಮಾಡಿದವು. ದಾಸರು ಅವರನ್ನು ಸೂಚ್ಯವಾಗಿ ಉದ್ದೇಶಿಸಿದ್ದರೂ ಇಡೀ ಮನುಷ್ಯಸಂಕುಲಕ್ಕೇ ಅನ್ವಯವಾಗುವಂತಹ ಹಲವಾರು ಕೃತಿ, ಕೀರ್ತನೆಗಳನ್ನು ರಚಿಸಿದರು. "ಕುಲ ಕುಲ ಕುಲವೆಂದು ಹೊಡೆದಾಡದಿರಿ" , "ಕುಲ ಕುಲವೆನ್ನುತಿಹರು" , "ತೀರ್ಥ ಪಿಡಿದವರೆಲ್ಲ ತಿರುನಾಮಧಾರಿಗಳೇ", "ಆವ ಕರ್ಮವೋ ಇದು ಆವ ಧರ್ಮವೋ, ದಾಸಪಟ್ಟವೋ ಸನ್ಯಾಸಪಟ್ಟವೋ" ಮುಂತಾದ ಕೀರ್ತನೆಗಳಲ್ಲಿ ಕನಕದಾಸರ ವೈಚಾರಿಕ ಪ್ರಜ್ಞೆಯ ಮೊನಚನ್ನು ನೋಡಬಹುದು. ಭಕ್ತಿಯ ಗಂಧವನ್ನರಿಯದ ಬಡಿವಾರದ ಜನರನ್ನು ಡೊಂಕುಬಾಲದ ನಾಯಕರೆ ನೀವೇನೂಟವ ಮಾಡಿದಿರಿ? ಎಂದು ಹಾಸ್ಯ ಮಾಡಲೂ ದಾಸರು ಹಿಂಜರಿಯಲಿಲ್ಲ.
ದಾಸರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ದೇಶವನ್ನು ತಿರುಗಿದರು. ಸಮಾಜದ ವಿವಿಧ ಜನಸಮೂಹದಲ್ಲಿ ಕಂಡುಬರುವ ದುಷ್ಟಪದ್ಧತಿಗಳನ್ನು, ಭ್ರಷ್ಟರನ್ನು ಯಾವುದೇ ದಾಕ್ಷಿಣ್ಯವಿಲ್ಲದೆ ಖಂಡಿಸಿದರು. ಏರುಪೇರುಗಳನ್ನು ಒಪ್ಪಿಕೊಳ್ಳದೆ ಪ್ರಶ್ನಿಸಿದರು. "ಬಾಗಿ ಪರಸ್ತ್ರೀಯರನ್ನು ಬಯಸಿ ಕಣ್ಣಿಡುವಂಥ, ಯೋಗ ಭ್ರಷ್ಟರೆಲ್ಲ ದೇವ ಬ್ರಾಹ್ಮಣರೇ?" ಎಂದು ಬ್ರಾಹ್ಮಣರನ್ನು ಕೇಳಿದ ಹಾಗೇ "ಕೆಟ್ಟ ಕೂಗನು ಕೂಗಿ ಹೊಟ್ಟೆ ಹೊರೆವಂಥ ಪೊಟ್ಟೆಗುಡುಮಗಳೆಲ್ಲ ಪರಮ ವೈಷ್ಣವರೇ?" ಎಂದು ವೈಷ್ಣವರೆಂದು ಬೀಗುವವರನ್ನು ತಿವಿದರು. ಲಿಂಗಾಂಗದೊಳಗಿರುವ ಚಿನ್ಮಯವನ್ನು ತಿಳಿಯದ ಲಿಂಗಾಯಿತರನ್ನು "ಜಂಗಮ ಸ್ಥಾವರದ ಹೊಲಬನರಿಯದ ಇಂಥ ಭಂಗಿಮುಕ್ಕಗಳೆಲ್ಲ ನಿಜ ಲಿಂಗವಂತರೆ?" ಎಂದು ಪ್ರಶ್ನಿಸಿದರು. ಸಾವಿರ ಆಸೆಯನ್ನು ಒಡಲೊಳಗಿಟ್ಟು ಹಣಗಳಿಕೆಯೆಂಬ ಏಕೋದ್ದೇಶದಿಂದ ವೇಷಧಾರಿಗಳಾದ ಸನ್ಯಾಸಿಗಳನ್ನು ಯಾವ ಮುಲಾಜಿಲ್ಲದೆ ಮೂದಲಿಸಿದರು. ಇದೇ ರೀತಿಯಲ್ಲಿ ಮುಲ್ಲ ಶಾಸ್ತ್ರದ ನೆಲೆಯರಿಯದೆ, "ಅಲ್ಲಾ ಖುದಾ" ಎಂಬುದರ ಅರ್ಥವನ್ನು ತಿಳಿಯದೆ "ಪೊಳ್ಳು ಕೂಗನು ಕೂಗಿ ಬಾಯಾರುವಂಥ"ವರನ್ನೂ ಸಹ ಕಟು ಮಾತುಗಳಿಂದ ಕಟುಕಿದರು.
ಕನಕದಾಸರು ಒಮ್ಮೆ ಉಡುಪಿಗೆ ಕೃಷ್ಣ ದರ್ಶನಕ್ಕಾಗಿ ಭೇಟಿ ಇತ್ತ ಸಂದರ್ಭದಲ್ಲಿ ಅಲ್ಲಿನ ಧೂರ್ತ ಪಂಡಿತರು ಹಾಗೂ ಮಡಿಯ ಆಫೀಮಿಗೆ ಒಳಗಾದ ಕೆಲವು ವಿಪ್ರರು ದಾಸರ ಮೇಲ್ಮೆಯನ್ನರಿಯದೆ ಕೀಳುಕುಲಜನೆಂದು ದರ್ಶನಕ್ಕೆ ಅಡ್ಡಿಪಡಿಸಿದಾಗ ಪೂರ್ವಾಭಿಮುಖವಾಗಿದ್ದ ಕೃಷ್ಣ ದಾಸರ ಭಕ್ತಿಗೆ ಒಲಿದು ಪಶ್ಚಿಮಾಭಿಮುಖನಾಗಿ ನಿಂತನೆಂಬ ಕಥೆ ಈಗ ವ್ಯಾಪಕವಾಗಿ ಜನಜನಿತವಾಗಿದೆ. ಇದರ ಸತ್ಯಾಸತ್ಯತೆಗಳು ಏನೇ ಇರಲಿ, ಕೃಷ್ಣನ ಎದುರಾಗಿ ಒಂದು ಕಿಂಡಿ ಇರುವುದಂತೂ ನಿಜ. ದೇಗುಲದ ಪ್ರವೇಶಕ್ಕೆ ಅರ್ಹರಲ್ಲದ ಶೂದ್ರಾದಿಗಳು ಆ ಕಿಂಡಿಯ ಮೂಲಕ ದರ್ಶನ ಪಡೆಯಲೆಂಬ ಉದ್ದೇಶದಿಂದ ನಿರ್ಮಿತವಾದ ಕಿಂಡಿ ಅದೆಂಬುದು ಕೆಲವರ ಅಭಿಪ್ರಾಯ. ಅದು ಈಗ "ಕನಕನ ಕಿಂಡಿ"ಯಾಗಿ ಪ್ರಸಿದ್ಧವಾಗಿದೆ.
ಅದರ ಎದುರಿಗೇ ಇರುವ "ಕನಕ ಗೋಪುರ" ಮತ್ತು ಪ್ರತಿಮೆ ಕನಕದಾಸರ ದಿವ್ಯಸ್ಮೃತಿಯೀವ ಸ್ಫೂರ್ತಿ ಕೇಂದ್ರವೆನ್ನಿಸುವುದಕ್ಕಿಂತಲೂ, ಆಗಾಗ ಜಾತಿವಿವಾದಗಳ ಬುಗಿಲೆಬ್ಬಿಸುವ ತಾಣವಾಗಿರುವುದು ವಿಪರ್ಯಾಸ.
ಉತ್ತರ ಕರ್ನಾಟಕದ 'ಬಾಡ'ದಲ್ಲಿ ಹುಟ್ಟಿ ಕಾಗಿನೆಲೆಯ ಆದಿಕೇಶವನನ್ನು ಒಲಿಸಿಕೊಂಡು ಅವನ ಅಂಕಿತದಲ್ಲಿಯೇ ನೂರಾರು ಕೃತಿ, ಕೀರ್ತನೆಗಳನ್ನು ರಚಿಸಿರುವ ಕನಕದಾಸರು ಇಂದು ನಮಗೆ ಹೆಚ್ಚು ಪರಿಚಿತವಾಗಿರುವುದು ಅವರು ರಚಿಸಿರುವ ಕೆಲವು ಕೀರ್ತನೆಗಳ ಮೂಲಕ. ಮತದ ಹಣೆಪಟ್ಟಿಗೆ ಜೋತುಬಿದ್ದ ಜನ ಅವರಿಗೆ ಅನುಕೂಲವಾದ ದಾಸರ ಕೀರ್ತನೆಗಳನ್ನು ಕನಕದಾಸರು ತಮ್ಮವರೆಂದು ಸಮರ್ಥಿಸಲು ಉದಾಹರಿಸುತ್ತಾರೆ. ಮತ್ತೆ ಕೆಲವು ಕದನ ಕುತೂಹಲಿಗಳು ಕನಕರನ್ನು ತಮ್ಮ ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳುತ್ತಾರೆ. ದಾಸರು ರಚಿಸಿರುವ ದೀರ್ಘ ಕೃತಿಗಳಾದ 'ರಾಮಧಾನ್ಯ ಚರಿತೆ, ನಳಚರಿತೆ, ಮೋಹನ ತರಂಗಿಣಿ, ಹರಿಭಕ್ತಿಸಾರ' ಮುಂತಾದವುಗಳನ್ನು ನೋಡಿದಾಗ ನಮಗೆ ಕಾಣುವ ಕನಕದಾಸರೇ ಬೇರೆ. ಕನಕದಾಸರ ಅಂತರಾಳದ ಸಮ್ಯಗ್‌ದರ್ಶನ ಅವರ ದೀರ್ಘ ಕೃತಿಗಳಿಂದಾಗುತ್ತವೆ. ರಾಮಧಾನ್ಯ ಚರಿತೆಯಂತೂ ದಾಸರ ಸಮಾಜಮುಖೀ ಧೋರಣೆಗೆ ಮತ್ತು ನಿಲವಿಗೆ ಹಿಡಿದ ಕೈಗನ್ನಡಿಯಾಗಿದೆ. ಕೇವಲ ಕೀರ್ತನಕಾರರಾಗಿ ಗುರುತಿಸಲ್ಪಟ್ಟಿರುವ ಕನಕದಾಸರ ಕಾವ್ಯಪ್ರತಿಭೆ ಅವರ ದೀರ್ಘಕೃತಿಗಳಲ್ಲಿ ಹೆಚ್ಚು ಮಿಂಚುತ್ತದೆ. ಹರಿಭಕ್ತಿಸಾರವಂತೂ ದಾಸರ ಮೇರುಸದೃಶ ಭಕ್ತಿಯನ್ನು ಸಮರ್ಥವಾಗಿ ಅನಾವರಣಗೊಳಿಸುತ್ತದೆ. ಕೇವಲ ಕೀರ್ತನಕಾರರಾಗಿ ಸೀಮಿತವಾಗಿರುವ ಕನಕದಾಸರನ್ನು ಸಮಗ್ರವಾಗಿ ಅರ್ಥೈಸಲು ದಾಸರ ಈ ಎಲ್ಲಾ ದೀರ್ಘ ಕೃತಿಗಳ ಮತ್ತು ಮುಂಡಿಗೆಗಳ ಅಧ್ಯಯನದ ಅಗತ್ಯ ಈಗ ಹೆಚ್ಚಿದೆ.
ಒಟ್ಟಾರೆ ಕನಕದಾಸರನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮೊದಲು ಮತದ ಕನ್ನಡಕವನ್ನು ಬಿಚ್ಚಿಡಬೇಕು, ದ್ವೈತಾದ್ವೈತದ ದುರ್ಬೀನನ್ನು ದೂರವಿಡಬೇಕು. ಏಕೆಂದರೆ ಕನಕದಾಸರು ಈ ಎಲ್ಲಾ ಮತೀಯ ಹಾಗೂ ತಾತ್ವಿಕ ನೆಲೆಗಟ್ಟನ್ನು ಮೀರಿದ ಭಕ್ತಿಯ ಸ್ವಚ್ಛಂದ ಬಾನಿನಲ್ಲಿ ವಿಹರಿಸುವ ಹೊಳೆಹೊಳೆವ ಮಹಾನಕ್ಷತ್ರ. ಎಂದೆಂದಿಗೂ ಕಳೆಗುಂದದೆ ಮಿನುಗುತ್ತಿರುವ ಆ ಮಹಾ ನಕ್ಷತ್ರವನ್ನು ಕಾಣಲು, ಆ ವರ್ಣರಂಜಿತ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಲು ಹೊಸಕಣ್ಣೊಂದನ್ನು ನಾವು ಹಚ್ಚಬೇಕು. ಅದೇ ದಾಸರು ತಮ್ಮ ಬದುಕಿನಾದ್ಯಂತ ನಂಬಿ, ನೆಚ್ಚಿ ಅನುಸರಿಸಿದ 'ಭಕ್ತಿ' ಎಂಬ ಹೊಳಪುಳ್ಳ ವಿಶೇಷ ಕಣ್ಣು.

Comments
Post a Comment